Saturday 11 July 2015

ಕನ್ನಡ ಸಂಸ್ಕಂತಿ

                                         
ಕರ್ನಾಟಕವು ಭಾರತದ ಅತ್ಯಂತ ಪ್ರಾಚೀನ ರಾಷ್ಟ್ರಗಳಲ್ಲೊಂದು. ಇಲ್ಲಿನ ಸಂಸ್ಕತಿಯೂ ಪ್ರಾಚೀನ ಮತ್ತು ಶ್ರೀಮಂತ. ಒಂದು ನಾಡಿನ ಅಥವಾ ಪ್ರದೇಶದ ಉತ್ತಮ ಸಾಧನೆಗಳು ಎಂದಾಗ, ಈವರೆಗೆ ಆ ನಾಡಿನಲ್ಲಿ ಆಗಿರುವ ಸಾಹಿತ್ಯ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳಲ್ಲಿನ ಮಹತ್ವದ ಸಾಧನೆಗಳು. ಈ ಸಾಧನೆಗಳು ಆ ನಾಡಿನ ಜನರ ಮೌಲ್ಯಗಳ ತಿರುಳು.    
                                               ವಾಸ್ತು ಕಲೆ    
ತಾಳಗುಂದದ ಪ್ರಣವೇಶ್ವರ ದೇವಾಲಯದಿಂದ ಆರಂಭಿಸಿ ಇತ್ತೀಚಿನ ಯಾವುದೇ ದೇವಾಲಯದ ವಾಸ್ತುವಿನ ಬಗೆಗೆ ಅಧ್ಯಯನ ಮಾಡುವ ಯಾರಿಗಾದರೂ ಇಲ್ಲಿನ ಬೆಳವಣಿಗೆಯು ಬೆರಗು ಹುಟ್ಟಿಸುತ್ತದೆ. ಬಹುತೇಕ ತಾಳಗುಂದದ ಪ್ರಣವೇಶ್ವರ ದೇವಾಲಯದ ಸಮಕಾಲೀನ ಅಥವಾ ಅದಕ್ಕೂ ಹಿಂದಿನ ಬೌದ್ಧ ಸ್ತೂಪವೊಂದು ಇತ್ತೀಚಿಗೆ ಸನ್ನತಿಯಲ್ಲಿ ಪತ್ತೆಯಾಗಿದೆ. ಅಂದರೆ ಬಹುತೇಕ ಶಾತವಾಹನ ಮತ್ತು ಕದಂಬರ ಕಾಲದ ವಾಸ್ತುಗಳು ನಮಗೆ ದೊರೆತಿವೆ. ಸನ್ನತಿಯಲ್ಲಿ ಸ್ತೂಪದ ಉತ್ಖನನ ಕಾರ್ಯ ಮುಗಿದಿದ್ದು, ಪುನರ್ನಿರ್ಮಾಣ ಕಾರ್ಯ ಆರಂಭವಾಗಿದೆ. ಬುದ್ಧನ ಬೇರೆ ಬೇರೆ ಭಂಗಿಯ ಶಿಲ್ಪಗಳು ಇಲ್ಲಿ ದೊರೆತಿವೆ. ಬಹುತೇಕ ಸ್ತೂಪದ ಎಲ್ಲಾ ಭಾಗಗಳು ದೊರೆತಿದ್ದು, ಇವುಗಳ ಪೈಕಿ ಅಶೋಕನ ಭಾವಶಿಲ್ಪವಿರುವ ಫಲಕವು ಅತ್ಯಂತ ಮಹತ್ವದ್ದಾಗಿದೆ. ಈಗ ಉಳಿದಿರುವ ತಾಳಗುಂದದ ಪ್ರಣವೇಶ್ವರ ದೇವಾಲಯದ ಗರ್ಭಗೃಹದಲ್ಲಿರುವ ಶಿವಲಿಂಗ ಮತ್ತು ಗರ್ಭಗೃಹದ ಬಾಗಿಲುವಾಡಗಳು ಮಾತ್ರ ಕದಂಬರ ಕಾಲದ್ದು. ಉಳಿದ ಭಾಗಗಳು ಕಾಲಾನಂತರದ ಬದಲಾವಣೆ ಮತ್ತು ಸೇರ್ಪಡೆಗಳು. ಹಲಸಿಯಲ್ಲಿ ಕದಂಬರ ಕಾಲದ ಬಸದಿಗಳಿವೆ.
ಬಾದಾಮಿ ಚಾಲುಕ್ಯರ ಕಾಲದಲ್ಲಿ ವಾಸ್ತುಶಿಲ್ಪದಲ್ಲಿ ಅನೇಕ ಪ್ರಯೋಗಗಳು ಆಗಿವೆ. ಬಾದಾಮಿಯ ಗುಹಾಲಯಗಳು ಮತ್ತು ಅಲ್ಲಿ ಕಟ್ಟಲಾಗಿರುವ ಕೆಲವು ದೇವಾಲಯಗಳು ಆ ಕಾಲದ ವಾಸ್ತುಗಳ ಬಗೆಗೆ ತಿಳಿಯಲು ಅತ್ಯಂತ ಮಹತ್ವದ ಉದಾಹರಣೆಗಳಾಗಿವೆ. ಬಾದಾಮಿಯ ನಾಲ್ಕು ಗುಹಾಲಯಗಳ ಪೈಕಿ ಮೊದಲನೆಯದು ಶಿವಾಲಯ ಮತ್ತು ಎರಡು ಹಾಗೂ ಮೂರನೆಯವು ವೈಷ್ಣವು ಗುಹಾಲಯಗಳು. ಇವು ಅತ್ಯಂತ ಸುಂದರ ಮಾತ್ರವಲ್ಲದೆ ಭವ್ಯವೂ ಹೌದು. ಮೂರನೆಯ ಗುಹೆಯ ನಿರ್ಮಾಣದ ಕಾಲ ಕ್ರಿ.ಶ. 578. ಅಂದರೆ ಮೊದಲ ಗುಹೆಯು ಕ್ರಿ.ಶ.ಸು.500ರ ವೇಳೆಗಾದರೂ ನಿರ್ಮಾಣವಾಗಿರಬೇಕೆಂದು ಊಹಿಸಬಹುದಾಗಿದೆ. ಕೊರೆದ ಗುಹೆಗಳು, ಅವುಗಳೊಳಗಿನ ಕಂಬಗಳು, ಕಂಬಗಳ ಮೇಲಿನ ಬೋದಿಗೆಗಳು, ಗರ್ಭಗೃಹ, ಸುಖನಾಸಿ, ಮುಖಮಂಟಪ, ಇತ್ಯಾದಿ ದೇವಾಲಯ ಭಾಗಗಳ ರಚನೆಯನ್ನು ಗಮನಿಸಿದಾಗ ಆ ಕಾಲದ ಶಿಲ್ಪಿಗಳ ಪರಿಣತಿಯ ಬಗೆಗೆ ಅಚ್ಚರಿ ಮೂಡುತ್ತದೆ. ಅದೇ ಕಾಲಕ್ಕೆ ಬಾದಾಮಿಯಲ್ಲಿ ಮಾತ್ರವಲ್ಲದೆ ಅದಕ್ಕೆ ಸಮೀಪವಿರುವ ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಕಟ್ಟಲಾಗಿರುವ ದೇವಾಲಯಗಳು ಆ ಕಾಲದ ವಾಸ್ತು ತಜ್ಞರ ಸಾಧನೆಯ ಬಗೆಗೆ ಹೆಮ್ಮೆ ಹುಟ್ಟಿಸುತ್ತವೆ. ಐಹೊಳೆಯಂತೂ ಪೂರ್ಣವಾಗಿ ದೇವಾಲಯಗಳ ನಗರ. ರಾವಳಫಡಿ ಗುಹೆಯಲ್ಲದೆ, ದುರ್ಗಗುಡಿ, ಗೌಡರಗುಡಿ, ಲಾಡ್ಖಾನ್ ಗುಡಿ, ಕೊಂತಿಗುಡಿ, ಚಕ್ರಗುಡಿ ಇತ್ಯಾದಿ ಇನ್ನೂ ಅನೇಕ ದೇವಾಲಯ ಸಂಕೀರ್ಣಗಳು ಐಹೊಳೆಯಲ್ಲಿವೆ. ಇವೆ ಲ್ಲವೂ ಕ್ರಿ.ಶ. 7ನೆಯ ಶತಮಾನದ ಆರಂಭಕಾಲದಿಂದ 9-10ನೆಯ ಶತಮಾನದವರೆಗೆ ನಿರ್ಮಿತವಾದುವು ಎಂದು ತಿಳಿಯಲಾಗಿದೆ. ಪಟ್ಟದಕಲ್ಲಿನಲ್ಲಿ ಇರುವ ಎಲ್ಲಾ ದೇವಾಲಯಗಳೂ ಒಂದೇ ಆವರಣದಲ್ಲಿವೆ. ನಾಗರ, ದ್ರಾವಿಡ ಮತ್ತು ವೇಸರ ಶೈಲಿಯ ಪ್ರಯೋಗಗಳನ್ನು ಇಲ್ಲಿ ಕಾಣಬಹುದು. ಬಹುತೇಕ ರಾಜಕುಟುಂಬದ ಸದಸ್ಯರಿಂದ ನಿರ್ಮಾಣವಾಗಿರುವ ಇಲ್ಲಿನ ದೇವಾಲಯಗಳ ಮೂಲಕ ಆ ಕಾಲದ ಹಲವು ವಾಸ್ತುಶಿಲ್ಪಿಗಳ ಹೆಸರುಗಳು ತಿಳಿಯುತ್ತವೆ. ತ್ರಿಭುವನಾಚಾರಿ ಎಂಬ ಶಿಲ್ಪಿಯು ದೇವಾಲಯದ ತೆಂಕಣ ದಿಶೆಯನ್ನು ನಿರ್ಮಾಣ ಮಾಡಿದವನೆಂದು ಅಲ್ಲಿನ ಒಂದು ಶಾಸನ ತಿಳಿಸುತ್ತದೆ.
ಬಾದಾಮಿಯ ಗುಹಾಲಯಗಳಲ್ಲದೆ ಮೇಗಣ ಮತ್ತು ಕೆಳಗಣ ಶಿವಾಲಯಗಳು, ಮಾಲೆಗಿತ್ತಿ ದೇವಾಲಯ, ಭೂತನಾಥ ಗುಡಿಗಳ ಗುಂಪು ಇತ್ಯಾದಿ ದೇವಾಲಯಗಳು ಹಾಗೂ ಪಟ್ಟದಕಲ್ಲಿನ ವಿರೂಪಾಕ್ಷ (ಹಿಂದಿನ ಲೋಕೇಶ್ವರ), ಮಲ್ಲಿಕಾರ್ಜುನ (ಹಿಂದಿನ ತ್ರೈಲೋಕೇಶ್ವರ), ಗಳಗನಾಥ ಇತ್ಯಾದಿ ದೇವಾಲಯಗಳು ಆ ಕಾಲದ ವಾಸ್ತುರಚನೆಗಳ ಉತ್ತಮ ಉದಾಹರಣೆಗಳಾಗಿವೆ.
ಬಾದಾಮಿ ಚಾಲುಕ್ಯರ ನಂತರ ರಾಷ್ಟ್ರಕೂಟರ ಕಾಲದಲ್ಲಿಯೂ ವಾಸ್ತುಶಿಲ್ಪವು ತನ್ನ ಉತ್ತಮಿಕೆಯನ್ನು ಬಿಟ್ಟುಕೊಡಲಿಲ್ಲ. ಆ ಕಾಲದ ಒಂದು ಪ್ರಮುಖ ಉದಾಹರಣೆಯನ್ನು ದಾಖಲಿಸಿದರೆ ಉಳಿದ ಯಾವ ವಾಸ್ತುವಿನ ಬಗೆಗೂ ವಿವರಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ರಾಷ್ಟ್ರಕೂಟರ ಕಾಲದ ಒಂದು ಮಹತ್ವದ ಮತ್ತು ಒಂದು ಅದ್ಭುತ ನಿರ್ಮಾಣವೆಂದರೆ ಎಲ್ಲೋರಾದ ಕೈಲಾಸ ದೇವಾಲಯ. ಸುಮಾರು 107 ಅಡಿ ಎತ್ತರ, 150 ಅಡಿ ಉದ್ದ ಮತ್ತು 100 ಅಡಿ ಆಗಲದ ಈ ದೇವಾಲಯದ ವಿಶಿಷ್ಟತೆ ಎಂದರೆ ಇದು ಒಂದು ಏಕ ಶಿಲಾ ದೇವಾಲಯ. ಸುಮಾರು 250 ವರ್ಷಗಳ ಅವಧಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ಎರಡು ಅಂತಸ್ತಿನದಾಗಿದ್ದು ನಿರ್ಮಿತ ದೇವಾಲಯದ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಗರ್ಭಗೃಹ, ಮುಖಮಂಟಪ, ಇತ್ಯಾದಿ ದೇವಾಲಯದ ಎಲ್ಲಾ ಭಾಗಗಳನ್ನೂ ಹೊಂದಿರುವ ಈ ದೇವಾಲಯವು ಅದ್ಭುತ ನಿರ್ಮಾಣಕ್ಕೆ ಒಂದು ಸುಂದರವಾದ ಉದಾಹರಣೆ.
ರಾಷ್ಟ್ರಕೂಟರ ನಂತರ ಆಳಿದ ಕಲ್ಯಾಣ ಚಾಲುಕ್ಯರು ಮತ್ತು ಅವರ ಸಮಕಾಲೀನ ಹೊಯ್ಸಳರ ಕಾಲದಲ್ಲಿ ಕರ್ನಾಟಕದ ವಾಸ್ತುಶಿಲ್ಪವು ಅತ್ಯಂತ ಉಚ್ಛಾ ್ರಯ ಸ್ಥಿತಿಯನ್ನು ತಲುಪಿತು. ಆಯತಾಕಾರದ ತಳವಿನ್ಯಾಸವು ನಕ್ಷತ್ರಾಕಾರಕ್ಕೆ ಬದಲಾಯಿತು. ಭಿತ್ತಿಯ ತುಂಬಾ ವಿವಿಧ ಬಗೆಯ ಶಿಲ್ಪಗಳು ತುಂಬಿ ತುಳುಕಿದ ಕಾಲ ಅದು. ಇಟಗಿ, ಕುರುವತ್ತಿ, ಲಕ್ಕುಂಡಿ, ಡಂಬಳ, ಚೌಡದಾನಪುರ, ಬಾಗಳಿ, ನಾಗಾಯಿ, ಗದಗ, ಸಿರಿವಾಳ, ಕುಕ್ಕನೂರು, ಬೇಲೂರು, ಹಳೇಬೀಡು, ದೊಡ್ಡಗದ್ದವಳ್ಳಿ, ಅರಸೀಕೆರೆ, ಜಾವಗಲ್ಲು, ಸೋಮನಾಥಪುರ ಇತ್ಯಾದಿ ಅನೇಕ ಸ್ಥಳಗಳಲ್ಲಿ ಒಂದಲ್ಲ ಹಲವಾರು ದೇವಾಲಯಗಳು ನಿರ್ಮಾಣವಾಗಿ ದೇವಾಲಯ ನಿರ್ಮಾಣದ ಪ್ರಕ್ರಿಯೆಯು ಜೀವಂತವಾಗಿ ಮುಂದುವರೆಯಿತು. ಇಲ್ಲೆಲ್ಲಾ ಅನೇಕ ಶಿಲ್ಪಿಗಳು ಕಲ್ಲುಗಳಿಗೆ ಜೀವ ತುಂಬಿದ್ದಾರೆ. ಬಾದಾಮಿ ಚಾಲುಕ್ಯರ ಕಾಲದಿಂದ ಏರು ದಿಕ್ಕಿನಲ್ಲಿ ಮುಂದುವರಿದ ವಾಸ್ತುಶಿಲ್ಪ ಪ್ರಯೋಗವು 11 ಮತ್ತು 12ನೆಯ ಶತಮಾನಗಳಲ್ಲಿ ಅತ್ಯುತ್ತಮ ಎನ್ನುವ ಸ್ಥಿತಿಯನ್ನು ತಲುಪಿತು. ಕುರುವತ್ತಿ, ಬೇಲೂರು, ಹಳೇಬೀಡು, ಕಿಕ್ಕೇರಿ ಇತ್ಯಾದಿ ಸ್ಥಳಗಳಲ್ಲಿರುವ ವಿವಿಧ ದೇವಾಲಯಗಳ ಒಳಹೊರಗುಗಳಲ್ಲಿ ಕಾಣುವ ಮದನಿಕಾ ಶಿಲ್ಪಗಳು ಈಗಲೂ ಆಕರ್ಷಣೀಯವಾಗಿವೆ.
ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಮೊದಲಿನಿಂದಲೂ ಇದ್ದ ದೇವಾಲಯಗಳಿಗೆ ರಕ್ಷಣೆ ದೊರೆಯಿತು. ಸುತ್ತಲೂ ಪ್ರಾಕಾರದ ಮಾದರಿಯಲ್ಲಿ ರಕ್ಷಣಾ ಗೋಡೆಗಳ ನಿರ್ಮಾಣದ ಜೊತೆಗೆ ದೇವಾಲಯಗಳ ವಿಸ್ತಾರವು ಹೆಚ್ಚಿತು. ಹಂಪೆಯಲ್ಲಿ ಅನೇಕ ಹೊಸ ದೇವಾಲಯಗಳ ನಿರ್ಮಾಣ ಆರಂಭವಾದರೂ ಇದ್ದ ಅನೇಕ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಿರಾತಂಕವಾಗಿ ಮುಂದುವರಿದಿರುವುದನ್ನು ಗುರುತಿಸಬಹುದು. ಹಂಪಿಯ ಹಜಾರ ರಾಮ ದೇವಾಲಯ, ವಿಠ್ಠಲ ದೇವಾಲಯ ಇತ್ಯಾದಿಗಳು ಆ ಕಾಲದ ವಾಸ್ತು ಶೈಲಿಯ ಪರಿಚಯ ಮಾಡಿಸುತ್ತದೆ. ವಿಜಯನಗರ ಕಾಲದ ದೇವಾಲಯಗಳಲ್ಲಿ ಯಾಗಶಾಲೆ, ಕಲ್ಯಾಣ ಮಂಟಪ, ಹಜಾರ ಇತ್ಯಾದಿ ಭಾಗಗಳು ಅಂದಂದಿನ ಅವಶ್ಯಕತೆಗೆ ತಕ್ಕಂತೆ ಸೇರಿಕೊಂಡಿವೆ.
ವಿಜಯನಗರ ಅರಸರ ಸಮಕಾಲೀನರಾಗಿ ಕರ್ನಾಟಕದ ಕೆಲವು ಭಾಗಗಳನ್ನು ಆಳಿದ ಬಹಮನೀ ಸುಲ್ತಾನರು ಮತ್ತು ಆದಿಲ್ಷಾಹಿಗಳು ಈ ಪ್ರದೇಶದ ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಂಪಿಯ ಕಮಲ ಮಹಲ್, ಬಿಜಾಪುರದ ಗೋಲ್ಗುಂಬಜ್, ಇಬ್ರಾಹಿಂರೋಜಾ ಮುಂತಾದ ಇಂಡೋ ಸಾರ್ಸೇನಿಕ್ ಶೈಲಿಯ ಕಟ್ಟಡಗಳು ಭಾರತೀಯ ಮತ್ತು ಮುಸ್ಲಿಂ ವಾಸ್ತುಶಿಲ್ಪಗಳ ಸೌಹಾರ್ದಯುತ ನೆಂಟಸ್ತಿಕೆಗೆ ಹೆಸರು ಪಡೆದಿವೆ.
ಪಾಳೆಯಗಾರರು ಮತ್ತು ಮೈಸೂರು ಅರಸರ ಕಾಲದಲ್ಲೂ ದೇವಾಲಯಗಳ ನಿರ್ಮಾಣ ಕಾರ್ಯ ಮುಂದುವರಿಯಿತು. ಆ ಕಾಲಕ್ಕೆ ಗಾರೆಯ ಬಳಕೆ ಹೆಚ್ಚಿತ್ತು. ಆದ್ದರಿಂದ ಎಷ್ಟೋ ದೇವಾಲಯಗಳ ಬಹುತೇಕ ಭಾಗಗಳು ಗಾರೆಯಿಂದಲೇ ನಿರ್ಮಾಣವಾಗಿವೆ. ಮೈಸೂರು, ಶ್ರೀರಂಗಪಟ್ಟಣ, ನಂಜನಗೂಡು ಮುಂತಾದ ಸ್ಥಳಗಳಲ್ಲಿ ಆ ಕಾಲದ ಹಲವು ಒಳ್ಳೆಯ ದೇವಾಲಯಗಳನ್ನು ನೋಡಬಹುದು.
ಬ್ರಿಟಿಷರ ಪ್ರಭಾವದಿಂದ ಕರ್ನಾಟಕದ ಹಲವು ಸ್ಥಳಗಳಲ್ಲಿ ಗಾಥಿಕ್ ಶೈಲಿಯಲ್ಲಿ ಅನೇಕ ಚರ್ಚುಗಳು ನಿರ್ಮಾಣಗೊಂಡಿವೆ. ಇಂತಹ ಹಲವು ಚರ್ಚುಗಳನ್ನು ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆಗಳಲ್ಲಿ ನೋಡಬಹುದು.   
                                                ಶಿಲ್ಪ ಕಲೆ
ಕರ್ನಾಟಕದಲ್ಲಿ ಶಿಲ್ಪಕಲೆಯು ಅತ್ಯಂತ ಪ್ರಾಚೀನವಾದುದು. ನವಶಿಲಾಯುಗದ ಕಾಲದಲ್ಲೇ ಮಣ್ಣಿನ ಬೊಂಬೆಗಳನ್ನು ತಯಾರಿಸಲಾಗುತ್ತಿತ್ತು. ಸಾತವಾಹನರ ಅನೇಕ ಬೊಂಬೆಗಳು ದೊರೆತಿವೆ. ಬನವಾಸಿಯ ನಾಗರಕಲ್ಲಿನ ಶಿಲ್ಪ, ಸನ್ನತಿಯಲ್ಲಿ ದೊರೆತಿರುವ ಅನೇಕ ಆಯಕ ಸ್ಥಂಭಗಳು ಆ ಕಾಲದ ಶಿಲ್ಪ ಕಲೆಯ ಬಗೆಗೆ ತಿಳಿಸುತ್ತವೆ.
ಬಾದಾಮಿಯ ಮೊದಲ ಗುಹೆಯ ಆರಂಭದಲ್ಲೇ ಇರುವ ಹದಿನೆಂಟು ಕೈಗಳ ನಟರಾಜನ ಶಿಲ್ಪವು 5 ಅಥವಾ 6ನೆಯ ಶತಮಾನದ ಒಂದು ಪ್ರಬುದ್ಧ ಮಾದರಿಯಾಗಿದೆ. ಹಾಗೆಯೇ ಐಹೊಳೆಯ ರಾವಳಫಡಿಯ ನಟರಾಜನ ಶಿಲ್ಪವೂ ಅತ್ಯಂತ ಸುಂದರವಾದ ಒಂದು ಕಲಾಕೃತಿ. ಬಾದಾಮಿಯ ಗುಹೆಗಳಲ್ಲಿರುವ ಬಹುತೇಕ ಎಲ್ಲಾ ಶಿಲ್ಪಗಳೂ ಅಂದಿನ ಕಲಾವಿದರ ಪ್ರಬುದ್ಧತೆಗೆ ಸಾಕ್ಷಿಯಾಗಿವೆ. ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ದೇವಾಲಯಗಳ ಭಿತ್ತಿಗಳಲ್ಲಿ ಕಾಣುವ ಪೌರಾಣಿಕ ಕಥೆಗಳನ್ನು ಆಧರಿಸಿದ ಶಿಲ್ಪಗಳು ಎಲ್ಲಾ ರೀತಿಯಿಂದಲೂ ಸುಂದರ ಮತ್ತು ವಸ್ತುನಿಷ್ಠ ಶೈಲಿಗೆ ಒಳ್ಳೆಯ ಉದಾಹರಣೆಗಳು. ಕಲ್ಯಾಣಚಾಲುಕ್ಯರು ಮತ್ತು ಹೊಯ್ಸಳರ ಕಾಲದಲ್ಲಿ ದೇವಾಲಯಗಳ ಒಳ ಮತ್ತು ಹೊರಭಾಗಗಳೆಲ್ಲವೂ ಅಲಂಕರಣಗೊಂಡವು. ಫಲವಾಗಿ ಶಿಲ್ಪಗಳು ಮಹತ್ವದ ಸ್ಥಾನ ಪಡೆದವು. ಆ ಕಾಲದ ಶಿಲ್ಪಗಳಲ್ಲಿ ಕುರುವತ್ತಿ, ಬೇಲೂರು, ಕಿಕ್ಕೇರಿ ಇತ್ಯಾದಿ ಸ್ಥಳಗಳಲ್ಲಿನ ದೇವಾಲಯಗಳಲ್ಲಿರುವ ಮದನಿಕಾ ಶಿಲ್ಪಗಳು ತುಂಬಾ ಆಕರ್ಷಕವಾಗಿವೆ.
ಕರ್ನಾಟಕದಲ್ಲಿನ ಮೂರ್ತಿ ಶಿಲ್ಪಗಳ ಬಗ್ಗೆ ಹೇಳುವಾಗ ಶ್ರವಣಬೆಳಗೊಳದ ಗೊಮ್ಮಟೇಶ್ವರನನ್ನು ಮರೆಯುವಂತಿಲ್ಲ. ಸುಮಾರು 58.5 ಆಡಿ ಎತ್ತರದ ಅತ್ಯಂತ ಸುಂದರವಾದ ಸ್ನಿಗ್ಧ ಸೌಂದರ್ಯ, ನೋಡುವವರ ಮನಸ್ಸುಗಳನ್ನೂ ಅಪಹರಿಸುವ ಭವ್ಯ ಬಾಹುಬಲಿಯ ಮೂರ್ತಿಯು ಬೊಪ್ಪಣ ಪಂಡಿತ ಎಂಬ ಕವಿ ಹೇಳಿರುವಂತೆ `ಜಿನಶ್ರೀರೂಪಮಾತ್ಮೋಪಮಂ' ಶ್ರವಣಬೆಳಗೊಳದ ಬಾಹುಬಲಿಯನ್ನು ಅವನಿಗೇ ಹೋಲಿಸಬೇಕು. ಏಕೆಂದರೆ ಹೋಲಿಕೆ ಮಾಡಲು ಮತ್ತೊಬ್ಷನಿಲ್ಲ. ಅಂತಹ ಮೂರ್ತಿಯ ನಿರ್ಮಾಣಕ್ಕೆ ಕಾರಣನಾದವನು ಚಾವುಡಂರಾಯ ಎಂಬ ದಂಡನಾಯಕ.ಕೆತ್ತಿದ ಶಿಲ್ಪಿ ಯಾರು ಎಂದು ಈವರೆಗೆ ತಿಳಿದಿಲ್ಲ. ಅನಂತರ ಕಾಲದಲ್ಲಿ ಕಾರ್ಕಳ, ಮೂಡುಬಿದರೆ, ಗೊಮ್ಮಟಗಿರಿ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿ ಗೊಮ್ಮಟ ಮೂರ್ತಿ ನಿರ್ಮಾಣಕಾರ್ಯವಾಗಿದೆ.
ವಿಜಯನಗರದ ಅರಸರ ಕಾಲದಲ್ಲೂ ಶಿಲ್ಪಗಳು ಹೆಚ್ಚು ಮಹತ್ವ ಪಡೆದವು. ಅದರ ಫಲವಾಗಿ ಹಂಪಿಯಲ್ಲಿ ಉಗ್ರನರಸಿಂಹ, ಕಡಲೆಕಾಳು ಮತ್ತು ಸಾಸಿವೆಕಾಳು ಗಣಪತಿ ಇತ್ಯಾದಿ ಶಿಲ್ಪಗಳು ರೂಪುಗೊಂಡಿವೆ.
                                                 ಚಿತ್ರ ಕಲೆ
ಪ್ರಾಗಿತಿಹಾಸ ಕಾಲದ ಜನರು ತಾವು ವಾಸಿಸುತ್ತಿದ್ದ ಗುಹೆಗಳಲ್ಲಿ ಬರೆದಿರುವ ರೇಖಾ ಚಿತ್ರಗಳು ಕರ್ನಾಟಕದ ಅನೇಕ ಭಾಗಗಳಲ್ಲಿ ಪತ್ತೆಯಾಗಿವೆ. ಈ ಚಿತ್ರಕಲೆಯು ಕ್ರಮೇಣ ಬೆಳವಣಿಗೆ ಹೊಂದಿ, ಹಲವಾರು ದೇವಾಲಯಗಳ ಒಳ ಅಂಗಳದ ಗೋಡೆ ಮತ್ತು ಛಾವಣಿಯನ್ನೂ ಅಲಂಕರಿಸಿವೆ. ಬಾದಾಮಿಯ ಮೂರನೆಯ ಗುಹಾಲಯದ ಒಳ ಛಾವಣಿ, ಹಂಪಿಯ ವಿರೂಪಾಕ್ಷ ದೇವಾಲಯದ ಮುಂದಿನ ರಂಗಮಂಟಪದ ಒಳ ಛಾವಣಿ, ಬಿಜಾಪುರ, ಬೀದರ್ಗಳ ಹಲವು ಕಟ್ಟಡಗಳು, ಶ್ರವಣಬೆಳಗೊಳದ ಜೈನಮಠದ ಹೊರ ಅಂಗಳ, ಸೀಬಿಯ ನರಸಿಂಹ ಸ್ವಾಮಿ ದೇವಾಲಯದ ಗೋಡೆಗಳು ಮತ್ತಿನ್ನೂ ಹಲವೆಡೆ ಆಯಾ ಕಾಲದ ಚಿತ್ರಕಲೆಯ ಉತ್ತಮ ಉದಾಹರಣೆಗಳನ್ನು ಕಾಣಬಹುದು.
                                            ಸಂಗೀತ, ನೃತ್ಯ ಕಲೆ
ದೇವಾಲಯಗಳ ಕಂಭಗಳು ಮತ್ತು ಹೊರಭಿತ್ತಿಯಲ್ಲಿ ಕೆತ್ತಲಾಗಿರುವ ಹಲವಾರು ಶಿಲ್ಪಗಳು ಆಯಾ ಕಾಲದಲ್ಲಿ ಪ್ರಚಲಿತವಿದ್ದ ಸಂಗೀತ ಮತ್ತು ನೃತ್ಯ ಕಲೆಯ ಬಗೆಗೆ ತಿಳಿಯಲು ನೆರವಾಗುತ್ತವೆ. ಬಾದಾಮಿಯ ಮೊದಲ ಗುಹೆಯ ಆರಂಭದಲ್ಲೇ ಎದುರಾಗುವ ಹದಿನೆಂಟು ಕೈಗಳ ನಟರಾಜನಿಂದಲೇ ನೃತ್ಯ ಮತ್ತು ಸಂಗೀತಗಳಿಗೆ ಸಂಬಂಧಿಸಿದ ಶಿಲ್ಪಗಳನ್ನು ಗುರುತಿಸಬಹುದು. ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳರ ಕಾಲದಲ್ಲಂತೂ ಶಿಲ್ಪಗಳು ಸಂಗೀತ ಮತ್ತು ನೃತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿವೆ.
ಮೊದಲಿಗೆ ರಾಜರ ಆಸ್ಥಾನಗಳಲ್ಲಿ ನಂತರ ದೇವಾಲಯಗಳಲ್ಲಿ ಬೆಳೆಯುವ ಅವಕಾಶ ಪಡೆದ ಸಂಗೀತ ಮತ್ತು ನೃತ್ಯಗಳು, ದೇವಾಲಯದ ಪೂಜಾ ಸಂದರ್ಭದಲ್ಲಿ ವಿಶೇಷ ಮಾನ್ಯತೆ ಪಡೆದಿದ್ದವು. ರಂಗಭೋಗದ ನೆಪದಲ್ಲಿ ಸಂಗೀತ ಮತ್ತು ನೃತ್ಯ ಕಲೆಗಳು ಪ್ರೋತ್ಸಾಹ ಪಡೆದವು. ದೇವಾಲಯಗಳಲ್ಲಿ ರಂಗಭೋಗಕ್ಕೆಂದೇ ಸೂಳೆಯರು, ಪಾತ್ರದವರು, ವಾದಕರು, ಗಾಯಕರು ಮತ್ತು ರಂಗಭೋಗದ ವಿದ್ಯಾವಂತರು ಇರುತ್ತಿದ್ದರು.
ಅನೇಕ ಕಾವ್ಯಗಳ ಮೂಲಕವೂ ಆಯಾ ಕಾಲದಲ್ಲಿ ಪ್ರಚಲಿತವಿದ್ದ ಸಂಗೀತ ಮತ್ತು ನೃತ್ಯ ಕಲೆಗಳ ಬಗೆಗೆ ತಿಳಿಯಲು ಅವಕಾಶಗಳಿವೆ. ಜಾನಪದ ಸಂಗೀತ ಮತ್ತು ನೃತ್ಯಗಳಂತೂ ಕರ್ನಾಟಕದ ಜನ ಮಾನಸದಲ್ಲಿ ಬೇರುಬಿಟ್ಟಿವೆ. ಎಲ್ಲಾ ಅರಸರ ಕಾಲದಲ್ಲೂ ಈ ಕಲೆಗಳು ವಿಶೇಷ ಪ್ರೋತ್ಸಾಹ ಪಡೆದಿವೆ.
                                                      ಶಿಕ್ಷಣ
ಕರ್ನಾಟಕದಲ್ಲಿ ಶಿಕ್ಷಣಕ್ಕೆ ಮೊದಲಿನಿಂದಲೂ ಒಳ್ಳೆಯ ಅವಕಾಶಗಳೇ ದೊರೆತಿವೆ. ಅಗ್ರಹಾರ, ಬ್ರಹ್ಮಪುರಿ, ದೇವಾಲಯ ಮತ್ತು ಅವುಗಳಿಗೆ ಹೊಂದಿಕೊಂಡ ಮಠಗಳು ಅಥವಾ ಶಾಲೆಗಳು ಹಾಗೂ ಪ್ರೌಢ ವಿದ್ಯಾಕೇಂದ್ರಗಳಾದ ಘಟಿಕಾಸ್ಥಾನಗಳು ಅಂದಂದಿನ ಅವಶ್ಯಕತೆಗೆ ತಕ್ಕಂತೆ ಶಿಕ್ಷಣ ಒದಗಿಸುತ್ತಿದ್ದವು. ಆರಂಭದಲ್ಲಿ ಮಕ್ಕಳಿಗೆ ವೇದ ಖಂಡಿಕೆಗಳನ್ನು ಹೇಳಿಕೊಡುವ ಬಾಲಕ್ಷರ ಶಿಕ್ಷೆ ಮತ್ತು ಕನ್ನಡಕ್ಷರ ಶಿಕ್ಷೆಗಳು ಇದ್ದವು. ಅಗ್ರಹಾರಗಳು ಮತ್ತು ಬ್ರಹ್ಮಪುರಿಗಳು ಅಧ್ಯಯನ ಮತ್ತು ಅಧ್ಯಾಪನಗಳಿಗೆಂದೇ ದತ್ತಿ ನೀಡಲಾಗುತ್ತಿದ್ದ ಗ್ರಾಮ ಅಥವಾ ನಗರ ಪ್ರದೇಶಗಳು. ಘಟಿಕಾಸ್ಥಾನಗಳಲ್ಲಿ ಶಾಸ್ತ್ರ ಮತ್ತು ಲೌಕಿಕ ವಿಷಯಗಳ ಬಗೆಗೆ ಶಿಕ್ಷಣ ದೊರೆಯುತ್ತಿತ್ತು. ನ್ಯಾಯ, ವೈಶೇಷಿಕ, ತರ್ಕ, ವ್ಯಾಕರಣ, ಛಂದಸ್ಸು, ಕಾಮಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಪ್ರೌಢ ಶಿಕ್ಷಣ ನೀಡಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಘಟಿಕಾ ಸಾಹಸಿ (ಘೈಸಾಸಿ), ಕ್ರವಿಂತ (ಕ್ರಮವಿತ್), ದ್ವಿವೇದಿ, ತ್ರಿವೇದಿ ಇತ್ಯಾದಿ ಪದವಿಗಳನ್ನು ನೀಡಲಾಗುತ್ತಿತ್ತು. ಸಾಲೊಟಗಿ, ಬಳ್ಳಿಗಾವೆ, ನಾಗಾವಿ ಮುಂತಾದ ಸ್ಥಳಗಳಲ್ಲಿ ಘಟಿಕಾ ಸ್ಥಾನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದುದಕ್ಕೆ ಸಮಕಾಲೀನ ದಾಖಲೆಗಳು ಲಭ್ಯವಿದೆ.

                                                      ಧರ್ಮ
ಎಲ್ಲ ಧರ್ಮಗಳ ಬಗೆಗೆ ಉದಾರವಾಗಿಯೇ ನಡೆದುಕೊಂಡಿವೆ. ಕರ್ನಾಟಕದ ಜನತೆ ಧರ್ಮ ಸಮನ್ವಯತೆಯನ್ನು ಸಾಧಿಸಿದ್ದರು.
ಆಶೋಕನ ಕಾಲದಲ್ಲಿ ಬೌದ್ಧ ಧರ್ಮವು ಕರ್ನಾಟಕದಲ್ಲಿ ಪ್ರಸಾರಗೊಳ್ಳಲು ನಡೆಸಿದ ಪ್ರಯತ್ನ ಅಥವಾ ಆಗಲೇ ಅಸ್ತಿತ್ವದಲ್ಲಿದ್ದ ಸುಳಿವನ್ನು, ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಶಾಸನಗಳು ಮತ್ತು ಸನ್ನತಿಯಲ್ಲಿ ದೊರೆತಿರುವ ಸ್ತೂಪಗಳು ಸೂಚಿಸುತ್ತವೆ. ಸನ್ನತಿ, ಬನವಾಸಿ, ಡಂಬಳ ಮತ್ತು ಬಳ್ಳಿಗಾವೆಗಳು ಒಂದು ಕಾಲಕ್ಕೆ ಪ್ರಸಿದ್ಧ ಬೌದ್ದ ಕೇಂದ್ರಗಳಾಗಿದ್ದುವು ಎಂದು ಶಾಸನಗಳ ಮೂಲಕ ತಿಳಿಯಲಾಗಿದೆ.
ಕದಂಬರು ವೈದಿಕ ಧರ್ಮವನ್ನು ಅವಲಂಬಿಸಿದ್ದವರಾದರೂ ಇನ್ನಿತರ ಧರ್ಮಗಳ ಬಗೆಗೆ ಪ್ರೀತಿ ಮತ್ತು ಗೌರವಗಳಿಂದ ನಡೆದುಕೊಂಡಿದ್ದಕ್ಕೆ ಅನೇಕ ಉದಾಹರಣೆಗಳು ದೊರೆಯುತ್ತವೆ. ದೇವಾಲಯಗಳನ್ನಲ್ಲದೆ ಅವರು ಬಸದಿಗಳ ನಿರ್ಮಾಣಕ್ಕೂ ದಾನ ನೀಡಿದ್ದರು ಮತ್ತು ಅವುಗಳ ಬೆಳವಣಿಗೆಗೆ ದಾನ - ದತ್ತಿಗಳನ್ನು ನೀಡಿದ್ದಾರೆ. ಇದು ಎಲ್ಲಾ ಅರಸರ ಕಾಲದಲ್ಲೂ ನಡೆದುಕೊಂಡು ಬಂದ ಚಟುವಟಿಕೆ. ಬಾದಾಮಿಯ ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಮುಂತಾದ ಎಲ್ಲಾ ಮನೆತನದ ಅರಸರೂ ವೈದಿಕ, ಜೈನ,ಬೌದ್ಧ ಮತ್ತು ಇತರ ಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದಾರೆ.
ಕೆಲವು ಬಾರಿ ಅಕಸ್ಮಿಕ ಎಂಬಂತೆ ಸಂಭವಿಸಿದ ಧಾರ್ಮಿಕ ಸಂಘರ್ಷಗಳನ್ನು ಆಯಾ ಕಾಲದ ರಾಜರು ಮತ್ತು ಜನತೆ ಸೌಹಾರ್ದಯುತವಾಗಿ ತೀರ್ಮಾನಿಸಿರುವುದಕ್ಕೆ ಕಲ್ಯ ಮತ್ತು ಶ್ರವಣಬೆಳಗೊಳಗಳಲ್ಲಿ ದೊರೆತಿರುವ ಬುಕ್ಕರಾಯನ ಶಾಸನವು ಉತ್ತಮ ಉದಾಹರಣೆಯಾಗಿದೆ.